ಈ ಭೂಲೋಕದಲ್ಲಿ ವಾಸ್ತವತೆಯನ್ನರಿಯುವ ನನ್ನ ಪಯಣದಲ್ಲಿ ಹಸಿರು ಕಾನನಗಳ ಜೊತೆಗಿನ ಸಂಬಂಧವನ್ನು ಅಚ್ಚಳಿಯದೇ ಉಳಿಸಿರುವುದು ಯಾವ ಲೀಲೆಯೋ ಆ ದೇವರೇ ಬಲ್ಲ. ಇನ್ನೊಂದು ಕಡೆ ಈ ಕಲಿಯುಗದಲ್ಲಿ ಅತಿ ಮುಂದುವರಿದಿರುವ ಮನುಜನಿಗೆ ಅವನ ಜೊತೆಗಿರುವ ಪ್ರಕೃತಿಯೊಂದಿಗೆ ಇರುವ ಅವಿನಾಶ ಸಂಬಂಧವನ್ನು ತೋರಿಸುವ(ನೆನಪಿಸುವ) ಸಲುವಾಗಿ ನಮ್ಮಂಥವರನ್ನು ಸೃಷ್ಟಿಸಿದ್ದಾನೆ ಎಂಬ ನಂಬಿಕೆಯೊಂದಿಗೆ ಈ ಬ್ಲಾಗ್ಗನ್ನು ಬರೆಯುತ್ತಿದ್ದೇನೆ..
ಆ ಕಾಲವು ನಾನು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಈ ಸಮಸ್ತ ಲೋಕವನ್ನರಿಯುವ ಸಮಯ. ಕುಟುಂಬದವರೊಂದಿಗೆ ಯಾತ್ರಾ ಸ್ಥಳಗಳಾದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳವನ್ನು ಆಗಾಗ್ಗೆ ಸಂದರ್ಶಿಸುವ ಪರಿಪಾಟವಿತ್ತು .ಪ್ರಯಾಣದ ಸಂದರ್ಭದಲ್ಲಿ ಹಟ ಹಿಡಿದು ಬಸ್ಸಿನ ಕಿಟಕಿ ಕಡೆಗಿನ ಸೀಟ್ ಹಿಡಿದು ಸಕಲೇಶಪುರ ಟೌನ್ ನಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಆಕಾಶವನ್ನು ಮುಟ್ಟಲು ಹಪಹಪಿಸುತ್ತಿರುವ ಬೆಟ್ಟ ಗುಡ್ಡ ಶ್ರೇಣಿಗಳು, ಮುಗಿಲೆತ್ತರಕ್ಕೆ ಬೆಳೆದ ಮರಗಳು, ರಸ್ತೆಗಳ ಇಕ್ಕೆಲಗಳಲ್ಲಿ ಹರಡಿಕೊಂಡ ಕಾಡು ಬಳ್ಳಿಗಳು, ಮರಗಳ ಬೇರುಗಳು, ಬಯಲು ಸೀಮೆಯಲ್ಲಿ ಬೆಳೆದವನಾದ ನನ್ನಲ್ಲಿ ವಿಚಿತ್ರ ಕುತೂಹಲ, ಅಚ್ಚರಿ ಭಾವನೆಗಳನ್ನು ಹುಟ್ಟಿಸಿತ್ತು..ಅವುಗಳನ್ನು ಬೇರೆಯವರೊಂದಿಗೆ ವ್ಯಕ್ತಪಡಿಸುವುದು, ಅವುಗಳಿಗೆ ತಕ್ಕ ಉತ್ತರಗಳೂ, ಪ್ರತಿಕ್ರಿಯೆಗಳನ್ನು ಪಡೆಯುವುದು ಆ ಬಾಲ್ಯ ಕಾಲದಲ್ಲಿ ಅಸಾಧ್ಯ ಮಾತಾಗಿತ್ತು..ಅದು ನನ್ನಲ್ಲಿ ಎಸ್ಟೋ ವರುಷಗಳ ತನಕ ಹುದುಗಿಕೊಂಡಿತ್ತು..
ಕಾಲ ಚಕ್ರವು ಉರುಳಿ ನಾನು ರೆಕ್ಕೆಗಳನ್ನು ಹರಡಿಕೊಂಡು ಬೇಕಾದ ದಿಕ್ಕಿಗಳಿಗೆ ಹಾರುವ ಕಾಲವು ಬಂತು..
ಬಾಸ್ಕ್ ನಿಂದ ಆಯೋಜಿಸಲ್ಪಟ್ಟ ಹಸಿರು-ದಾರಿ ಚಾರಣವನ್ನು (ಸಕಲೇಶಪುರ ರೈಲು ನಿಲ್ದಾಣದಿಂದ ಕುಕ್ಕೆಸುಬ್ರಮಣ್ಯ ರಸ್ತೆ ರೈಲು ನಿಲ್ದಾಣದವರೆಗೆ ರೈಲು ಹಳಿಗಳ ಮೇಲೆ ಮಾಡುವ ಚಾರಣ) ಯನ್ನು ಎರಡು ವರುಷಗಳ ಹಿಂದೆ ಮಾಡಿದ್ದೆ..ಆ ಸಮಯದಲ್ಲಿ ಮುಗಿಲೆತ್ತರಕ್ಕಿರುವ ಬೆಟ್ಟಗಳು ನನ್ನನ್ನು ಆಮಂತ್ರಿಸುತ್ತಿರುವಂತೆ ಭಾಸವಾಗುತ್ತಿತ್ತು. ಚಾರಣ ಆದ ಒಂದು ವರುಷಗಳ ನಂತರ ಅದೇ ಚಾರಣದ ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗಿ ಬಂದಾಗಿನಿಂದ ಆ ಬೆಟ್ಟಗಳ ತುತ್ತ ತುದಿಗಳನ್ನ ಮುಟ್ಟಿ ಬರಲೇ ಬೇಕೆಂಬ ಹಂಬಲ ಶುರುವಾಗಿತ್ತು. ಕೊನೆಗೆ ಬಾಸ್ಕ್ ನ ಸಹಾಯದಿಂದ ಸಮಾನ ಮನಸ್ಕರನ್ನು ಪಡೆದು ಚಾರಣಕ್ಕೆ ಅಣಿಯಾದೆ. ಸಮಾನ ಮನಸ್ಕರನ್ನು ಪಡೆಯುವ ಕ್ರಿಯೆಯಲ್ಲಿ ಮಿಂಚಂಚೆಗಳಲ್ಲಿ ನಾನಾ ಕಡೆಗಳಿಂದ ತೂರಿಬಂದ ಅನೇಕಾನೇಕ ಪ್ರಶ್ನೆಗಳೆನ್ನುದುರಿಸಿ, ಒದಗಬಹುದಾದ ಗಂಡಾತರಗಳ ಬಗ್ಗೆ ಸೂಚನೆಗಳನ್ನು ಸ್ವೀಕರಿಸಿದ ಹೊರತಾಗಿಯೂ ನಾನು ನನ್ನನ್ನೇ ವಿಚಲಿತನನ್ನಾಗಿಸಿಕೊಳ್ಳದಿರುವುದು ನನ್ನ ಸೌಭಾಗ್ಯವೆಂದೆಣಿಸುತ್ತೇನೆ..
ಮಿಂಚಂಚೆಗಳಲ್ಲಿ ಸಮಾನ ಮನಸ್ಕರ ಜೊತೆಗೆ ಪೂರ್ವ ಸಿದ್ದತೆಗಳನ್ನು ವಿನಿಮಯ ಮಾಡಿಕೊಂಡು ಕೊನೆಯಲ್ಲಿ ಭೇಟಿಯ ಸ್ಥಳ, ಸಮಯವನ್ನು ನಿಗದಿಪಡಿಸಿದೆ..ಸಕಾಲಕ್ಕೆ ಬೆಂಗಳೂರನ್ನು ತಲುಪಿ ರೈಲ್ವೆ ನಿಲ್ದಾಣದಲ್ಲಿ ಭರ್ತಿ ಒಂದು ಪ್ಲೇಟ್ ಇಡ್ಲಿ ತಿಂದು ಸ.ಮನಸ್ಕರ(ಸಮಾನ ಮನಸ್ಕರ) ಸಂದೇಶಗಳಿಗಾಗಿ ಕಾಯುತ್ತಾ ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಹೊರಟೆ.
ಪ್ಲ್ಯಾಟ್‌ಫಾರ್ಮ್ ಸನಿಹಕ್ಕೆ ಬಂದು ಕಣ್ಣು ಹಾಯಿಸಿದರೆ ಮುಂಗಡವಾಗಿ ಕಾದಿರಿಸಿದ ಸೀಟುಗಳ ಬಸ್ಸು ಬಂದಿರಲಿಲ್ಲ. ನನ್ನ ಪಕ್ಕದಲ್ಲೇ ಕೆ.ಎಸ್.ಆರ್.ಟಿ.ಸಿ ಯ ಸಹಾಯಕ ನಿಯಂತ್ರಕರು ಅವರ ಕರ್ತವ್ಯ ಮಾಡುತ್ತಿದ್ದರು. ಅವರ ಹತ್ತಿರ ಬಸ್ಸಿನ ಬಗ್ಗೆ ವಿಚಾರಿಸುವ ಸಮಯಕ್ಕೂ, ನನ್ನ ಕಣ್ಣ ಮುಂದೆ ನಮ್ಮ ಬಸ್ಸು ಬರುವುದು ತಾಳೆಯಾಗಿತ್ತು.. ಪರಸ್ಪರ ನಗುಮೊಗ ತಂದುಕೊಂಡು ಕಣ್ಣಂಚಿನಲ್ಲೇ ಅವರನ್ನು ಬೀಳ್ಕೊಂಡೆ..
ಯಾವ ಸ.ಮನಸ್ಕರು ಇನ್ನು ತಲುಪಿರಲಿಲ್ಲ ಎಂದು ಕಾಣುತ್ತಿತ್ತು. ಬಸ್ಸುಗಳ ನಡುವೆ ಶಿಸ್ತಿನ ಸಿಪಾಯಿಯಂತೆ ಸಾಲಾಗಿ ನಿಂತುಕೊಂಡ ನಮ್ಮ ಬಸ್ಸಿನ ಕಂಡಕ್ಟರ್ ಹತ್ತಿರ ಹೋಗಿ ಪೂರಕ ದಾಖಲೆಗಳ ಜೊತೆ ಕಾದಿರಿಸಿದ ಟಿಕೆಟ್ ಗಳನ್ನು ಮತ್ತು ನಾವು ಇಳಿಯಬೇಕಾದ ಜಾಗದ ಬಗ್ಗೆ ವಿವರಿಸಿ ಎಲ್ಲವನ್ನು ಧೃಡಪಡಿಸಿಕೊಂಡೆ. ನಂತರ ಪ್ಲ್ಯಾಟ್‌ಫಾರ್ಮ್ಅಲ್ಲಿ ಒಂದೊಂದಾಗಿ ಸ.ಮನಸ್ಕರು ಸೇರತೊಡಗಿದರು. ಎಲ್ಲರೂ ಸೇರಿದ ನಂತರ ನಮ್ಮ ಪಯಣ, ಯೋಜನೆಗಳು, ಚಾರಣದ ಬಗ್ಗೆ ಕೂಲಂಕುಷವಾಗಿ ವಿವರಿಸಿದೆ. ಕೊನೆಯಲ್ಲಿ ಎಲ್ಲರೂ ಸಿದ್ದವಾದರೂ ಪ್ರಯಾಣಕ್ಕೆ.
ಬಸ್ಸು ನಿಂತಿದ್ದ ಜಾಗವನ್ನು ಸುಮಾರು ನಿಮಿಷಗಳ ಹಿಂದೆ ಕಣ್ಣಂಚಿನಲ್ಲೇ ಅಳತೆ ಮಾಡಿಕೊಂಡಿದ್ದು ಸಹಾಯಕ್ಕೆ ಬರಲಿಲ್ಲ. ಹತ್ತಿದ್ದು ಮೂಡಿಗೆರೆ ಬಸ್ಸು..ಈ ಬಸ್ ಸಂತೆ ಯಲ್ಲಿ ಯಾವುದು ಮಾಯ ಆಗತ್ತೆ, ಯಾವುದು ಪ್ರತ್ಯಕ್ಷ ಆಗುತ್ತದೆ ಎಂಬ ವಿಷಯದಲ್ಲಿ ಹುಷಾರಾಗಿರಬೇಕೆನ್ನುವ ಅರಿವಾಯಿತು. ಎಲ್ಲರ ಕ್ಷಮೆ ಕೋರಿ ಸರಿಯಾದ ಬಸ್ಸನ್ನು ಹತ್ತಿದೆ(ಹತ್ತಿಸಿದೆ).
ಮಹಾನಗರದ ಪರಿಧಿಯನ್ನು ದಾಟಿ ಮುಂದೆ ಸಾಗುತ್ತಿದ್ದ ಬಸ್ಸಿನಲ್ಲಿ ನನಗೆ ನಿದ್ದೆ ಹತ್ತಿತು.(ಸ.ಮನಸ್ಕರಿಗೆ ಪ್ರಯಾಣದ ಅವಧಿಯಲ್ಲಿ ಸರಿಯಾಗಿ ನಿದ್ದೆ ಹತ್ತಲಿಲ್ಲ ಎನ್ನುವುದು ನಂತರ ಗೊತ್ತಾಯಿತು.) ಗುಂಡ್ಯ ತಲುಪಿದ ನಂತರ ನನಗೆ ಎಚ್ಚರವಾಯಿತು. ಸಕಲೇಶಪುರ ಮತ್ತು ಸುಬ್ರಮಣ್ಯ ರೋಡ್ ನ ರೈಲು ಸೇತುವೆಯ ಹತ್ತಿರ ಬಸ್ಸು ನಿಂತಿತು. ನಾವೆಲ್ಲಾ ನಮ್ಮೆಲ್ಲರ ಸರಕು ಸಂಜಾಮುಗಳನ್ನು ಕೆಳಗಿಳಿಸಿದೆವು.
ಬಸ್ಸು ಹೊರಟ ನಂತರ ಕಗ್ಗತ್ತಲಲ್ಲಿ ಆಗಾಗ್ಗೆ ಇಣುಕುತ್ತಿದ್ದ ವಾಹನಗಳ ದೀಪಗಳ ಬೆಳಕಿನಲ್ಲಿ ನಮ್ಮ ಧಿರಿಸುಗಳನ್ನು ಚಾರಣಕ್ಕೆ ಸೂಕ್ತವಾದ ರೀತಿಯಲ್ಲಿ ಬದಲಾಯಿಸಿದೆವು .ಕುಕ್ಕೆ ರೈಲು ನಿಲ್ದಾಣಕ್ಕೆ ಹೋಗುವ ದಾರಿಯನ್ನು ಬಳಸಿಕೊಂಡು ಎಡಕುಮರಿ ಕಡೆಗೆ ಚಾರಣವನ್ನು ಪ್ರಾರಂಭಿಸಿದೆವು. ಒದ್ದೆಯಾಗಿದ್ದ ರೈಲು ಹಳಿಗಳು ಮಳೆಯ ಪ್ರಮಾಣವನ್ನು ಸಾರಿ ಹೇಳುತ್ತಿದ್ದವು. ನಡೆಯುತ್ತಿದ್ದಂತೆ ಕ್ಯಾಮರಗಳು ಜೀವಂತಿಕೆಯನ್ನು ಪಡೆದುಕೊಂಡು ಸುತ್ತಮುತ್ತಲಿನ ಚಿತ್ರಗಳನ್ನು ಕ್ಲಿಕ್ಕ್ಕಿಸತೊಡಗಿದವು. ಕೇಸರಿ ಬಣ್ಣದ ಚಂದ್ರನು ಸೂರ್ಯೋದಯಕ್ಕೆ ಮುಂಚೆ ಬೆಳಗಿ ಆಕಾಶಕ್ಕೆ ಮೆರುಗನ್ನು ನೀಡಿದ್ದ..
ರೈಲು ಬರುವ ಸದ್ದಾಗಿ ಪಕ್ಕಕ್ಕೆ ಸರಿದಾಗ ಚಲಿಸುತ್ತಿರುವ ರೈಲಿನ ಚಾಲಕನು ನಮ್ಮನ್ನು ನೋಡಿ "ಎಂಥ ಜನರಪ್ಪ" ಎನ್ನುವ ರೀತಿಯಲ್ಲಿ ಬೈದ.. ಶುರುವಿನಲ್ಲೇ ಹೀಗಾದರೆ ಮುಂದೆ ಹೇಗಿರಬಹುದು ಎಂಬ ಆಲೋಚನೆ ನುಸುಳಿತು. ತಕ್ಕ್ಷಣವೇ ತಹಬಂದಿಗೆ ಬಂದು ಸಸ್ಯಸಂಕುಲದ ವೈಭವವನ್ನು ಸವಿಯತೊಡಗಿದೆ..ರೈಲು ಸೇತುವೆ ಕೆಳಗಡೆ ಝುರಿ ಕಾಣಿಸಿದಾಗ ಕೆಳಗಿಳಿದು ನಿತ್ಯ ಕರ್ಮಗಳನ್ನು ಪೂರೈಸಿಕೊಂಡು ತಿಂಡಿ ತಿನ್ನುವುದೆಂದು ನಿಶ್ಚಯಿಸಿಕೊಂಡು ದಾರಿ ಮಾಡಿಕೊಂಡು ಹೋದರೆ ದಟ್ಟ ಪೊದೆಗಳು, ಮುಳ್ಳು ಕಂಟಿಗಳು ಅಡ್ಡಪಡಿಸಿದವು. ಇದರಿಂದಾಗಿ ಇತ್ತೀಚೆಗೆ ಚಾರಣಿಗರು ರೈಲು ದಾರಿಯನ್ನು ಜಾಸ್ತಿ ಬಳಸುತ್ತಿಲ್ಲವೆಂದು ಅರ್ಥ ಮಾಡಿಕೊಂಡೆ. ಕೊನೆಗೆ ಹಳಿಗಳ ಬದಿಯಲ್ಲಿ ವಿರಮಿಸಿ ಹಣ್ಣುಗಳು, ಚಪಾತಿ, ಬಿಸ್ಕೆಟ್ ತಿಂದು ಮುಂದೆ ಸಾಗಿದೆವು. ನಮ್ಮಲ್ಲಿ ಕೆಲವರಿಗೆ ರೈಲು ಸುರಂಗಗಳು ಒಂದು ಅತ್ಯದ್ಭುತವಾಗಿ ಕಾಣಿಸುತ್ತಿತ್ತು.
ಸಿರಿಬಾಗಿಲು ರೈಲು ನಿಲ್ದಾಣ ತಲುಪುತ್ತಿದ್ದಂತೆ ಸ.ಮನಸ್ಕರನ್ನು ಸೇರಿಸಿ ರೈಲು ಸಿಬ್ಬಂದಿಗಳಿಂದ ಒದಗಬಹುದಾದ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ನಮ್ಮಲ್ಲೊಬ್ಬ ಶಾಂತವಾಗಿ ನನಗೆ ಹೇಳುತಿದ್ದ "ನಮ್ಮಲ್ಲಿ ಏನಿದೆಯೋ ಅಷ್ಟು ತೋರಿಸಿದರೆ ಸಾಕು" ಅಂತ. ಆದರೆ ನಾನು ಪಾಶುಪತಾಸ್ತ್ರ, ಬ್ರಹ್ಮ್ಹಾಸ್ತ್ರ , ವಾಯುವ್ಯಾಸ್ತ್ರಗಳಿಗೆ ಬೇಕಾದ ಪರಿಕರಗಳನ್ನು ಸಜ್ಜುಗೊಳಿಸುವುದಕ್ಕೆ ಗಮನವನ್ನೀಯುತ್ತಿದ್ದೆ..
ರೈಲು ನಿಲ್ದಾಣದ ಸಿಬ್ಬಂದಿಗಳು ನಮ್ಮನ್ನು ಗಮನಿಸುತ್ತಿದ್ದರೂ ಸಹ ನಾವು ನಮ್ಮ ಪಾಡಿಗೆ ಮುಂದೆ ಹೋಗುತ್ತಿದ್ದೆವು. ಅಚಾನಕ್ಕಾಗಿ ನಮ್ಮನ್ನು ಮಾತುಕತೆಗಳೆದ ಸಿಬ್ಬಂದಿಗಳು ನೀರು ಇರುವ ಜಾಗವನ್ನು ತೋರಿಸಿದರು. ನೀರನ್ನು ತುಂಬಿಸಿಕೊಂಡು ಮುಂದಕ್ಕೆ ಸಾಗಿದೆವು. 200 ಮೀಟರ್ ಅಂತರದಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದ ಝುರಿಯು ರೈಲು ಸೇತುವೆಯ ಕೆಳಗಡೆ ಕಾಣಿಸಿತು. ನೀರಿನ ಜೊತೆಗಿನ ಅನುಭೂತಿಯನ್ನು ಪಡೆಯಲು ಎಲ್ಲರೂ ಮನಸ್ಸು ಮಾಡಿ ಕೆಳಗಿಳಿದರು. ಕೆಲವರು ನೀರಿನ ಜೊತೆ ಆಟಕ್ಕೆ ಇಳಿದರೆ ಕೆಲವರು ನಿದ್ರೆಗೆ ಶರಣಾದರೂ. ಕೆಲಕಾಲದ ವಿಶ್ರಾಂತಿಯ ನಂತರ ಮೇಲಕ್ಕೇರಿ ರೈಲು ಸುರಂಗಗಳನ್ನು ದಾಟುತ್ತ ಬಂದೆವು. ಒಂದು ನಿರ್ದಿಷ್ಟ ಭೂ ಭಾಗಕ್ಕೆ ಬರುತ್ತಿದ್ದಂತೆ ರೈಲು ಹಳಿಗಳನ್ನು ಬಿಟ್ಟು ಕಾಡಿನೊಳಗೆ ನುಸುಳುವ ಪ್ರಯತ್ನ ಮಾಡಿದೆವು. ಸರಿಯಾದ ದಾರಿ ಸಿಗದೆ ಪರದಾಡುವ ಸ್ಥಿತಿ ಬಂದಿತ್ತು.
ಎಡಕುಮರಿ ಶಿಖರಗಳ ಶ್ರೇಣಿಯ ಕಿರಿಭಾಗದ ಕೊನೆಯೂ ಕಾಣುತ್ತ ಬಂದ ಹಾಗೆ ಆ ಭಾಗದಿಂದ ಹತ್ತುವುದೆಂಬ ನಿಶ್ಚಯ ಮಾಡಿಕೊಳ್ಳುವ ಸಮಯಕ್ಕೆ ಹಿಂದಿನ ಚಾರಣ ಸಂದರ್ಭದಲ್ಲಿ ಬಳಸುತ್ತಿದ್ದ ವಿಶ್ರಾಂತಿಯ ಜಾಗವು ಕಾಣಿಸಿತು. ನೀರಿನ ಸೆಲೆಯೂ ಇತ್ತು. ವಿರಮಿಸಿಕೊಳ್ಳುವ ಸಂದರ್ಭದಲ್ಲಿ ಮೇಲಕ್ಕಡೆ ಇನ್ನೊಂದು ಒಣಗಿದ ಝುರಿಯ ದಾರಿ ಕಾಣಿಸಿತು. ಅದರ ಜಾಡು ಹಿಡಿದು ಶಿಖರ ಶ್ರೇಣಿಯ ಕಿರಿಯ ಭಾಗದ ತುದಿಯನ್ನು ತಲುಪುವುದೆಂಬ ಎಣಿಕೆಯೊಂದಿಗೆ ಗಾಢ ನಿದ್ರೆಯಲ್ಲಿದ್ದ ಇತರರನ್ನು ಎಬ್ಬಿಸಿ ಹತ್ತತೊಡಗಿದೆ.
ಲಂಬವಾಗಿ ನಿಂತ ಬೆಟ್ಟದ ದಾರಿಯನ್ನು ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಹತ್ತುವುದು ದುರ್ಲಭವಾಗುತ್ತಾ ಬಂದಿತು. ಆದರೂ ನಾಲ್ಕೈದು ಅಡಿ ಎತ್ತರ ಬೆಳೆದ ಹುಲ್ಲುಗಳನ್ನೇ ಆಧಾರವಾಗಿಟ್ಟುಕೊಂಡು ಹತ್ತತೊಡಗಿದೆವು. ವಿಶಾಲವಾದ ಹುಲ್ಲುಗಾವಲುಗಳ ಜೊತೆಗೆ ನಾವು ತಲುಪಬೇಕೆಂದುಕೊಂಡಿದ್ದ ಶಿಖರಗಳ ತುದಿಗಳು ಗೋಚರಿಸುತ್ತಾ ಬಂದಿತು. ದಾರಿಯಲ್ಲಿ ಆಗಾಗ್ಗೆ ಕಾಣಿಸುತ್ತಿದ್ದ ಆನೆಗಳ ಲದ್ಡಿಗಳು ಆನೆಗಳ ಓಡಾಟದ ಸಾಂದ್ರತೆಯನ್ನು ಒತ್ತಿ ಹೇಳುತ್ತಿದ್ದವು. ಕೊನೆಗೆ ಶಿಖರಗಳಲ್ಲೇ ಚಿಕ್ಕದಾದ ಶಿಖರದ ತುದಿ ತಲುಪಿದೆವು. ಅಷ್ಟು ಹೊತ್ತಿಗೆ ಮಳೆರಾಯನು ಬಿಸಿ ಬೆವರಿನಿಂದ ತೊಪ್ಪೆಯಾಗಿದ್ದ ನಮ್ಮೆಲ್ಲರಿಗೆ ಸಣ್ಣದಾಗಿ ತಂಪನ್ನೆರೆಯುತ್ತಾ ಬಂದನು.. ತುತ್ತ ತುದಿಯ ಇಕ್ಕೆಲಗಳಲ್ಲಿ ನೋಡಿದರೆ ನಮಗೆ ಒಂದು ಕಡೆ ಗುಂಡ್ಯ, ಬೆಳ್ತಂಗಡಿಯ ಪ್ರದೇಶವು, ಇನ್ನೊಂದು ಕಡೆ ಕುಕ್ಕೆ ಸುಬ್ರಮಣ್ಯ ಪ್ರದೇಶವು ಅದರಲ್ಲೂ ವಿಶೇಷವಾಗಿ ಕುಮಾರಪರ್ವತದ ಮೇಲ್ಭಾಗವು ಮೋಡಗಳಿಂದ ಆವೃತವಾಗಿರುವುದು ಕಾಣಿಸುತ್ತಿತ್ತು. ಕೆಲಕಾಲದ ವಿಶ್ರಾಂತಿ ಪಡೆದು ಎಡಕುಮರಿಯ ಹಲವಾರು ಕಿರಿಯ ಶ್ರೇಣಿಯ ಶಿಖರಗಳ ತುತ್ತ ತುದಿಗಳನ್ನು ಮುಟ್ಟುತ್ತ ಮುಂದೆ ಸಾಗಿದೆವು.
ಒಂದು ಶಿಖರದ ತುದಿಗೆ ಬರುತ್ತಿದ್ದಂತೆ ಶಿರಾಡಿ ಕಣಿವೆಯು ಅದರ ವಿಶ್ವರೂಪ ದರುಶನವನ್ನೀಯುತ್ತ ನನ್ನಲ್ಲಿ ರೋಮಾಂಚನವನ್ನುಂಟು ಮಾಡಿದ. ಶಿರಾಡಿ ಘಟ್ಟವನ್ನು ನೋಡುತ್ತಾ ನಾನು ನನ್ನನ್ನೇ ಮರೆಯುತ್ತ ಬಂದೆ. ಅಷ್ಟೊತ್ತಿಗೆ ನಮ್ಮಲ್ಲರೊಬ್ಬ ಕತ್ತಲಾಗುತ್ತಿರುವ ಬಗ್ಗೆ ಎಚ್ಚರಿಸಿ ರಾತ್ರಿಯ ಶಿಬಿರಕ್ಕೆ ಒಳ್ಳೆಯ ಜಾಗವನ್ನು ಹುಡುಕುವಂತೆ ಮಾಡಿದ. ಒಂದು ಜಾಗವನ್ನು ಸದ್ಯದ ಮಟ್ಟಿಗೆ ಸುರಕ್ಷಿತ ಎಂದು ಧೃಡಪಡಿಸಿಕೊಂಡು ರಿಕಾಣಿ ಹೂಡಿದೆವು. ಲಭ್ಯವಿದ್ದ ನೀರಿನ ಪ್ರಮಾಣವು ಕಮ್ಮಿ ಇದ್ದ ಕಾರಣ ಖಾಲಿ ನೀರಿನ ಸೀಸೆಗಳ ಜೊತೆ ನಮ್ಮಲ್ಲಿ ಇಬ್ಬರು ಬೆಟ್ಟದ ಕೆಳಗಿಳಿದು ನೀರಿನ ಹರಿವು ಇರುವ ಜಾಗಗಳನ್ನು ಅಂದಾಜು ಮಾಡಿ ನೀರಿನ ಸೆಳೆಗಳನ್ನರಸಿಕೊಂಡು ಹೋಗುವ ಹೊತ್ತಿಗೆ ಮಳೆರಾಯನು ರುದ್ರನರ್ತನಕ್ಕಿಳಿದ. ಹಲವಾರು ಜಾಗಗಳಲ್ಲಿ ಹುಡುಗಿ ನಿರಾಶರಾಗಿ ಬರಿ ಕೈಯಲ್ಲಿ ಹಿಂತಿರುಗಬೇಕಾಯಿತು.
ಮಿಂಚು, ಗುಡುಗುಗಳು ಮಳೆರಾಯನ ನರ್ತನಕ್ಕೆ ಸಾಥ್ ಕೊಡುತ್ತಾ ಇದ್ದ ರೀತಿಯೂ ನನ್ನಲ್ಲಿ ಭಾವಾವೇಶವನ್ನು ಉಕ್ಕಿಸುತ್ತಿತ್ತು.. ಗಂಟಲು ಹರಿದುಹೋಗುವಂತೆ ಜೋರಾಗಿ ಕಿರುಚಬೇಕೆಂಬ ಆಸೆಯು ಇಮ್ಮಡಿಯಾಗುತ್ತ ಬಂದಿತ್ತು.. ಒಂದು ಕಡೆ ನನ್ನ ಮನಸ್ಸು ಹೇಳುತಿತ್ತು.. ಹಾಗೆ ಮಾಡಕ್ಕೆ ಹೋದರೆ ನಕ್ಷಲ್ ಕೈಗೆ ಅಧವಾ ನಕ್ಷಲ್ ನಿಗ್ರಹ ದಳದ ಕೈಗೆ ಸಿಕ್ಕಿಹಾಕಿಕೊಳ್ಳುವುದು ಖಾತ್ರಿ ಮತ್ತು ನನ್ನ ಬತ್ತಳಿಗೆಯಲ್ಲಿರುವ ತುಕ್ಕು ಹಿಡಿದ ಅಸ್ತ್ರಗಳು ಆ ಸಮಯದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಅಂತ!! ತೆಪ್ಪಗೆ ಕುಳಿತುಕೊಂಡು ಒಬ್ಬರಿಗೊಬ್ಬರು ಅಂಟಿಕೊಂಡು ಮಳೆಯ ವೈಭವದಲ್ಲಿ ಚಾಕ್ಲೇಟ್ಸ್, ಬಿಸ್ಕಿಟ್ಸ್ ಸವಿಯತೊಡಗಿದೆವು.. ಸುಮಾರು ನಿಮಿಷಗಳ ನಂತರ ನನಗೆ ತೂಕಡಿಕೆ ಶುರು ಆಗುತ್ತಿದ್ದಂತೆ ಎದ್ದು ನಿಂತು ಸ್ಲೀಪಿಂಗ್ ಬ್ಯಾಗ್ ಹರಡಿಕೊಂಡು ಸುಬ್ಬುವಿನ poncho ಅನ್ನೇ ವಾಟರ್‌ಪ್ರೂಫ್ ಟೆಂಟ್ ಮಾಡಿಕೊಂಡು ಮಳೆಯಲ್ಲೇ ಮಲಗಿದೆ. ಬರುತ್ತ ನಿದ್ದೆ ಬಂತು.. ಅದರ ಜೊತೆ ಮಳೆಯ ತಾಂಡವ ನೃತ್ಯವೂ ಜಾಸ್ತಿ ಆಗುತ್ತಾ ಬಂತು. ಆದ್ರೆ ಅವುಗಳೆಲ್ಲ ನನ್ನ ನಿದ್ದೆಯನ್ನು ತಡೆಯಲು ಅಸಮರ್ಧವಾಗಿದ್ದವು..
ಸುಮಾರು ಏಳು ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ ಮುಂಜಾನೆ 04.30 ಕ್ಕೆ ಎದ್ದೆ. ನನ್ನ ಸ್ಲೀಪಿಂಗ್ ಬ್ಯಾಗ್ ಸ್ವಲ್ಪ ಒದ್ದೆ ಆಗಿತ್ತು. ದೂರದ ದಿಗಂತದಲ್ಲಿ ಬೆಳಕಾಗುತ್ತಾ ಬಂದಿತ್ತು..ಮಳೆರಾಯನು ನಮ್ಮ ಜಾಗವನ್ನು ಬಿಟ್ಟು ಬೇರೆ ಕಡೆ ತಾಂಡವ ಮಾಡಲು ಹೋಗಿದ್ದ. ಮೈ ಮುರಿದುಕೊಳ್ಳುತ್ತಾ ಶಿರಾಡಿ ಘಟ್ಟಗಳ ಕಡೆ ಕಣ್ಣು ಹಾಯಿಸಿದೆ..ಅದರಲ್ಲೂ ಬೆಂಗಳೂರು-ಮಂಗಳೂರು ರಾಸ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಿಣುಕು ಹುಳಗಳಂತೆ ಕಾಣುತ್ತಿದ್ದ ರೀತಿಯೂ ನಯನ ಮನೋಹರವಾಗಿತ್ತು. ಇನ್ನೊಂದು ಕಡೆ ಆ ದೃಶ್ಯಗಳು ಆಕಾಶದಿಂದ ಬಿದ್ದ ನಕ್ಷತ್ರಗಳು ಅವುಗಳ ವಾಸ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಿರುವಂತೆ ಅರ್ಥವನ್ನು ಕೊಡುತ್ತಿತ್ತು. ಒಟ್ಟಿನಲ್ಲಿ ಈ ಕ್ಷಣಗಳು ನನಗೆ ಮುದವನ್ನೀಯುವುದರಲ್ಲಿ ಸಮರ್ಥವಾಗಿದ್ದವು..
ಶಿರಾಡಿ ಘಾಟ್ ಅದರ ಮೇಲೆ ಬಿದ್ದ ಮಳೆಯನ್ನು ಮೋಡಗಳ ರೂಪದಲ್ಲಿ ಮೇಲಕ್ಕೇರಿಸುವ ರೀತಿಯನ್ನು ನೋಡಿ ಪ್ರಕೃತಿಯ ಅತುಲ ಸಾಮರ್ಥ್ಯಕ್ಕೆ ತಲೆಬಾಗಿದೆ.
ಶಿರಾಡಿ ಘಟ್ಟಗಳು ಮತ್ತು ಯಡಕುಮರಿ ಘಟ್ಟಗಳ ನಡುವೆ ಹರಿಯುವ ಎತ್ತಿನಹೊಳೆಯು ಮೋಡಗಳ ಸೃಷ್ಟಿಗೆ ಸಹಾಯ ಮಾಡುತ್ತಿದ್ದವು..
ಸಮಯ ಕಳೆಯುತ್ತಿದ್ದಂತೆ ಮೂಡಣದಲ್ಲಿ ಸೂರ್ಯನು ಉದಯಿಸಿದ..
.
.
(Will write the remaining part after sometime!! :P :P)
.
.
೨ನೆ ಭಾಗ ಯಾವಾಗ ಬಿಡುಗಡೆ?
ReplyDeleteayyyoo.. kelbeda!! :|
Deleteಅದ್ಭುತವಾಗಿ ಮೂಡಿ ಬಂದಿರುವ ನಿಮ್ಮ ಚಾರಣದ ಅನುಭವವನ್ನು ಓದಿ ಈಗ ನಿಮ್ಮ ಎರಡನೇ ಆವೃತ್ತಿಗೆ ಕಾತರದಿಂದ ಕಾಯುತ್ತಿದ್ದೇನೆ .... ಒಸಿ ಡಿಮ್ಯಾಂಡ್ ಇರೋವಾಗ್ಲೇ ಬರ್ದು ಮುಗ್ಸ್ರಪ್ಪೋ ...
ReplyDelete:)
DeleteNeevu hattiruva gudda Maohada gudda.
ReplyDeleteWaiting for second part!!
The pack!!
Deletedont wait.. please!! :D
Nimma ee charana varusha dhareyinda atyanta katheena mattu adhbhutawagittu anta melnotakke kandubaruttide. Nimma ee baravanige modamodalu savistarawagi parichayisutta, munde tumba kshiprawagi mugisiddiri anta besarawaguttide. Nimma accha kannada da padagala balakege tumbu hrudayada shubhashayagalu. Nimma yeradane awatarinikege kayuttiruve.
ReplyDeleteNeevu bejaru maadkollalla andre vandu maatu helalu icchisuttene, dayavittu swalpa kannada kaagunitagala kadege gamana kotre valleyadu. Udharanege Huduki yemba pada hudugi anta acchagide, heege innu kelavu padagalive.
Hii Sagar...
DeleteDhanyavaadagalu... :)